ಜಾಗತಿಕ ಅನಾವರಣದ ನಂತರ ಮೊದಲ ಬಾರಿಗೆ ರಹಸ್ಯ ಕ್ಯಾಮೆರಾದಲ್ಲಿ ಸೆರೆಯಾದ ಮಹೀಂದ್ರಾ ಸ್ಕೋರ್ಪಿಯೊ N ಆಧರಿತ ಪಿಕಪ್
ಈ ಪರಿಕಲ್ಪನೆಯ ಸದೃಢ ವಿನ್ಯಾಸವನ್ನು ಈ ವರ್ಷದಲ್ಲಿ ಪ್ರದರ್ಶಿಸಲಾಗಿದ್ದು ಇದು ಪರೀಕ್ಷಾರ್ಥ ವಾಹನದ ರೂಪದಲ್ಲಿ ಎಲ್ಲೂ ಕಾಣಿಸಿಕೊಂಡಿರಲಿಲ್ಲ
- ಮಹೀಂದ್ರಾ ಸ್ಕೋರ್ಪಿಯೊ N ಅನ್ನು ಆಧರಿಸಿದ ಹೊಸ ಪಿಕಪ್ ವಾಹನವು ಮರೆಮಾಚಿದ ಸ್ಥಿತಿಯಲ್ಲಿ ಪರೀಕ್ಷೆ ನಡೆಸುತ್ತಿರುವ ವೇಳೆಯಲ್ಲಿ ಬಹಿರಂಗವಾಗಿ ಕಾಣಿಸಿಕೊಂಡಿದೆ.
- ಹಿಂಭಾಗದ ಪ್ರೊಫೈಲ್ ಮುಕ್ತವಾಗಿ ಕಾಣಿಸಿಕೊಂಡಿದ್ದು ಗ್ಲೋಬಲ್ ಪಿಕಪ್ ಕಾನ್ಸೆಪ್ಟ್ ನ ರಗ್ಡ್ ಡಿಸೈನ್ ಎಲಿಮೆಂಟ್ ಗಳನ್ನು ಇದು ಹೊಂದಿಲ್ಲ
- ಇದರ ಕ್ಯಾಬಿನ್, ಸ್ಕೋರ್ಪಿಯೊ N ನ ಕ್ಯಾಬಿನ್ ಅನ್ನೇ ಹೋಲುತ್ತಿದ್ದು ದೊಡ್ಡದಾದ ಟಚ್ ಸ್ಕ್ರೀನ್ ಇನ್ಫೊಟೈನ್ ಮೆಂಟ್ ಅನ್ನು ಪಡೆಯುವ ಸಾಧ್ಯತೆ ಇದೆ.
- ಸ್ಕೋರ್ಪಿಯೊ N ವಾಹನದ 2.2 ಲೀಟರ್ ಡೀಸೆಲ್ ಎಂಜಿನ್ ನ ಪರಿಷ್ಕೃತ ಆವೃತ್ತಿಯನ್ನು ಇದು ಬಳಸಿಕೊಳ್ಳಲಿದೆ.
- ಇದು ಸುಮಾರು ರೂ. 25 ಲಕ್ಷಕ್ಕೆ (ಎಕ್ಸ್ - ಶೋರೂಂ) ದೊರೆಯುವ ಸಾಧ್ಯತೆ ಇದೆ.
ಮಹೀಂದ್ರಾ ಸಂಸ್ಥೆಯು ಸ್ಕೋರ್ಪಿಯೊ N ಆಧರಿತ ಪಿಕಪ್ ಟ್ರಕ್ ಪರಿಕಲ್ಪನೆಯನ್ನು ಎಲೆಕ್ಟ್ರಿಕ್ ಥಾರ್ ಜೊತೆಯಲ್ಲಿ ಈ ವರ್ಷದಲ್ಲಿ ಮಹೀಂದ್ರಾ ಗ್ಲೋಬಲ್ ಪಿಕಪ್ ಹೆಸರಿನಲ್ಲಿ ಪ್ರದರ್ಶಿಸಿದ್ದು ಇದು ದೊಡ್ಡದಾದ ಮತ್ತು ಸದೃಢ ವಿನ್ಯಾಸವನ್ನು ಹೊಂದಿದೆ. ಇತ್ತೀಚೆಗೆ ಈ ಹೊಸ ಮಹೀಂದ್ರಾ ಪಿಕಪ್ ವಾಹನವು ತನ್ನ ಸ್ಪೈ ಡೆಬ್ಯೂ ಅನ್ನು ಮಾಡಿದ್ದು, ಆನ್ಲೈನ್ ನಲ್ಲಿ ಕಾಣಿಸಿಕೊಂಡಿರುವ ವೀಡಿಯೋ ಒಂದು ಇದರ ಹಿಂಭಾಗವನ್ನು ಸೆರೆ ಹಿಡಿದಿದೆ. ಆದರೆ, ಮರೆಮಾಚಿದ ಪರೀಕ್ಷಾರ್ಥ ವಾಹನವು ಇದರ ಪರಿಕಲ್ಪನೆಗಿಂತ ಸಾಕಷ್ಟು ಭಿನ್ನವಾಗಿದ್ದು ಇದನ್ನು ನೀವಿಲ್ಲಿ ನೋಡಬಹುದು.
ಸದೃಢತೆ ಕಾಣಸಿಗದು
ಸ್ಪೈ ವೀಡಿಯೋದಲ್ಲಿ ಹೊಸ ಮಹೀಂದ್ರಾ ಪಿಕಪ್ ವಾಹನದ ಹಿಂಭಾಗವನ್ನು ಸ್ಪಷ್ಟವಾಗಿ ನೋಡಬಹುದಾಗಿದ್ದು, ಗ್ಲೋಬಲ್ ಪಿಕಪ್ ಪರಿಕಲ್ಪನೆಯಲ್ಲಿ ಕಾಣಬಹುದಾದ ಒರಟಾದ ಮತ್ತು ಸದೃಢ ಅಂಶಗಳು ಇಲ್ಲಿ ಕಾಣಲು ಸಿಗುವುದಿಲ್ಲ. ಮಧ್ಯದಲ್ಲಿ ಹ್ಯಾಂಡಲ್ ಇರುವುದರ ಜೊತೆಗೆ ಸಪಾಟಾದ ಪ್ರೊಫೈಲ್ ಅನ್ನು ಇದು ಹೊಂದಿದ್ದು, ದೊಡ್ಡದಾದ ಮಹೀಂದ್ರಾ ಲೋಗೋ ಇಲ್ಲಿ ಕಾಣಸಿಗದು. ಅಲ್ಲದೆ ಇದರಲ್ಲಿರುವ ಟೇಲ್ ಲ್ಯಾಂಪ್ ಸಹ ಕಾನ್ಸೆಪ್ಟ್ ಗಿಂತ ಭಿನ್ನವಾಗಿದೆ.
ಇದನ್ನು ಸಹ ಓದಿರಿ: ಭಾರತದಲ್ಲಿ ಬಿಡುಗಡೆಗೆ ಇನ್ನಷ್ಟು ಹತ್ತಿರವಾಗಿರುವ ಮಹೀಂದ್ರಾ ಗ್ಲೋಬಲ್ ಪಿಕಪ್, ವಿನ್ಯಾಸದ ಪೇಟೆಂಟ್ ಗೆ ಅರ್ಜಿ
ಅಲ್ಲದೆ ಕಾನ್ಸೆಪ್ಟ್ ನಲ್ಲಿ ದೊಡ್ಡದಾದ ರಿಯರ್ ಬಂಪರ್ ಮತ್ತು ಸ್ಕಿಡ್ ಪ್ಲೇಟ್ ಕಾಣಸಿಕ್ಕಿತ್ತು. ಇದು ಸಹ ಪರೀಕ್ಷಾರ್ಥ ವಾಹನದಲ್ಲಿ ಕಂಡುಬಂದಿಲ್ಲ. ಪ್ರೊಫೈಲ್ ನಲ್ಲಿ ಪರೀಕ್ಷಾರ್ಥ ವಾಹನವು ಸ್ಕೋರ್ಪಿಯೊ N ವಾಹನದಲ್ಲಿರುವ ಅಲೋಯ್ ವೀಲ್ ಗಳನ್ನೇ ಹೊಂದಿದ್ದರೂ, ಜಾಗತಿಕವಾಗಿ ಅನಾವರಣಗೊಂಡ ಪರಿಕಲ್ಪನೆಯು ಆಫ್ ರೋಡ್ ಟೈರ್ ಗಳೊಂದಿಗೆ ಬೇರೆಯೇ ರೀತಿಯ ಅಲೋಯ್ ಗಳನ್ನು ಹೊಂದಿತ್ತು.
ಈ ಪಿಕಪ್ ವಾಹನವು ಸ್ಕೋರ್ಪಿಯೊ N ನಲ್ಲಿರುವಂತೆಯೇ ಸಿಲೂಯೆಟ್ ಗಳನ್ನು ಹೊಂದಿದ್ದರೂ ಪರಿಕಲ್ಪನೆಯಲ್ಲಿರುವ ವಿನ್ಯಾಸವು ಭಿನ್ನತೆಯನ್ನು ಹೊಂದಿದೆ. ಸೈಡ್ ಸ್ಟೆಪ್, ರೂಫ್ ರ್‍ಯಾಕ್, ದೊಡ್ಡದಾದ ವೀಲ್ ಆರ್ಚ್ ಗಳು ಇತ್ಯಾದಿಗಳು ಪರೀಕ್ಷಾರ್ಥ ವಾಹನದಲ್ಲಿ ಕಾಣಸಿಗುವುದಿಲ್ಲ.
ಈ ಅತ್ಯಂತ ಸರಳ ವಿನ್ಯಾಸವು ಮರೆಮಾಚಿದ ಭಾಗದ ಅಂಗವೆನಿಸಿದ್ದು, ಮಹೀಂದ್ರಾ ಪಿಕಪ್ ವಾಹನದ ನೈಜ ವಿನ್ಯಾಸವನ್ನು ಬಚ್ಚಿಡಲು ಈ ರೀತಿ ಮಾಡಲಾಗಿದೆ. ಅಲ್ಲದೆ ಈ ವಾಹನವು ಪಕ್ಕನೇ ಭಾರತದ ಮಾರುಕಟ್ಟೆಗೆ ಕಾಲಿಡುವಂತೆ ಕಾಣುತ್ತಿಲ್ಲ.
ಕ್ಯಾಬಿನ್ ಮತ್ತು ವೈಶಿಷ್ಟ್ಯಗಳು
ಸ್ಪೈ ವೀಡಿಯೋದಲ್ಲಿ ಕಾಣಿಸಿಕೊಂಡಿರುವ ಪರೀಕ್ಷಾರ್ಥ ವಾಹನದಲ್ಲಿ ಕ್ಯಾಬಿನ್ ನ ಕ್ಷಣನೋಟವಷ್ಟೇ ಕಾಣಿಸಿಕೊಂಡಿದೆ. ಆದರೆ, ಗ್ಲೋಬಲ್ ಪಿಕಪ್ ವಾಹನದ ಒಳಭಾಗವು ಅನಾವರಣದ ಸಂದರ್ಭದಲ್ಲಿ ಕಾಣಿಸಿಕೊಂಡಿದ್ದು, ಇದರ ಕ್ಯಾಬಿನ್, ಸ್ಕೋರ್ಪಿಯೊ N ವಾಹನದಲ್ಲಿರುವ ಕ್ಯಾಬಿನ್ ಅನ್ನೇ ಹೋಲುವ ಸಾಧ್ಯತೆ ಇದೆ. ಹೀಗಾಗಿ ಇದು ಕಪ್ಪು ಮತ್ತು ಕಂದು ಬಣ್ಣದ ಕ್ಯಾಬಿನ್ ಥೀಮ್, ಮಲ್ಟಿ ಲೆವೆಲ್ ಡ್ಯಾಶ್ ಬೋರ್ಡ್, ಮತ್ತು ಸುತ್ತಲೂ ಕ್ರೋಮ್ ಎಲಿಮೆಂಟ್ ಗಳನ್ನು ಪಡೆಯಲಿದೆ.
ಇದನ್ನು ಸಹ ಓದಿರಿ: ಅಕ್ಟೋಬರ್ 2023ರ ಕಾಂಪ್ಯಾಕ್ಟ್ SUV ಮಾರಾಟದಲ್ಲಿ ಹ್ಯುಂಡೈ ಕ್ರೆಟಾವನ್ನು ಹಿಂದಿಕ್ಕಿದ ಮಹೀಂದ್ರಾ ಸ್ಕೋರ್ಪಿಯೊ N ಮತ್ತು ಕ್ಲಾಸಿಕ್
ಹೊಸ ಮಹೀಂದ್ರಾ ಪಿಕಪ್ ವಾಹನವು 8 ಇಂಚಿನ ಟಚ್ ಸ್ಕ್ರೀನ್ ಇನ್ಫೊಟೈನ್ ಮೆಂಟ್ ಸಿಸ್ಟಂ, ಸಂಪರ್ಕಿತ ಕಾರ್ ಟೆಕ್, ಸೆಮಿ ಡಿಜಿಟಲ್ ಇನ್ಸ್ ಟ್ರುಮೆಂಟ್ ಕ್ಲಸ್ಟರ್, ಅಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಅನೇಕ ಏರ್ ಬ್ಯಾಗ್ ಗಳು, ಹಾಗೂ ಡ್ರೈವರ್ ಡ್ರೌಸಿನೆಸ್ ಡಿಟೆಕ್ಷನ್ ಸೇರಿದಂತೆ ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂ (ADAS) ಅನ್ನು ಹೊಂದಿರಲಿದೆ.
ಪವರ್ ಟ್ರೇನ್ ಆಯ್ಕೆಗಳು
ಮಹೀಂದ್ರಾ ಗ್ಲೋಬಲ್ ಪಿಕಪ್ ನಲ್ಲಿ ಸ್ಕೋರ್ಪಿಯೊ N ನ 2.2-ಲೀಟರ್ ಡೀಸೆಲ್ ಎಂಜಿನ್ ನ (175 PS ಮತ್ತು 400 Nm ತನಕ) ಪರಿಷ್ಕೃತ ಆವೃತ್ತಿಯನ್ನು ಬಳಸಲಾಗುತ್ತದೆ. ಜತೆಗೆ ಇದು 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಅಟೋಮ್ಯಾಟಿಕ್ ಟ್ರಾನ್ಸ್ ಮಿಶನ್ ಅನ್ನು ಹೊಂದಿರಲಿದೆ. ಈ ಪಿಕಪ್ ವಾಹನದಲ್ಲಿ ಅನೇಕ ಡ್ರೈವ್ ಮೋಡ್ ಗಳೊಂದಿಗೆ 4 ವೀಲ್ ಡ್ರೈವ್ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗುತ್ತದೆ.
ಬಿಡುಗಡೆ, ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಮಹೀಂದ್ರಾ ಸಂಸ್ಥೆಯು ಗ್ಲೋಬಲ್ ಪಿಕಪ್ ವಾಹನದ ಬಿಡುಗಡೆಯ ಸಮಯವನ್ನು ಇನ್ನೂ ಬಹಿರಂಗಗೊಳಿಸಿಲ್ಲ. ಆದರೆ ಇದು ಭಾರತದಲ್ಲಿ ಬಿಡುಗಡೆಯಾಗಲಿದ್ದು 2026ರಲ್ಲಿ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಇದರ ಬೆಲೆಯು ರೂ. 25 ಲಕ್ಷದಿಂದ (ಎಕ್ಸ್-ಶೋರೂಂ) ಪ್ರಾರಂಭವಾಗಲಿದ್ದು, ಇಸುಜು V-ಕ್ರಾಸ್ ಜತೆಗೆ ಇದು ಸ್ಪರ್ಧಿಸಲಿದೆ ಮಾತ್ರವಲ್ಲದೆ ಟೊಯೊಟಾ ಹೈಲಕ್ಸ್ ವಾಹನಕ್ಕೆ ತುಸು ಅಗ್ಗದ ಬದಲಿ ವಾಹನ ಎನಿಸಲಿದೆ.
ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ಮಹೀಂದ್ರಾ ಸ್ಕೋರ್ಪಿಯೊ N ಅಟೋಮ್ಯಾಟಿಕ್