Hyundai Creta Facelift ಬುಕಿಂಗ್ ಆರಂಭ, ಟೀಸರ್ ಚಿತ್ರಗಳ ಮೊದಲ ಸೆಟ್ ಬಿಡುಗಡೆ
ಹೊಸ ಹ್ಯುಂಡೈ ಕ್ರೆಟಾ ವಾಹನವು ಭಾರತದ ಮಾದರಿಯಲ್ಲಿನ ವಿನ್ಯಾಸದಲ್ಲಿ ಸಾಕಷ್ಟು ಮಟ್ಟಿಗೆ ಬದಲಾವಣೆಯನ್ನು ಮಾಡಿದೆ ಮಾತ್ರವಲ್ಲದೆ ಹೆಚ್ಚಿನ ಅನುಕೂಲತೆ ಮತ್ತು ಸುರಕ್ಷತೆಯ ತಂತ್ರಜ್ಞಾನವನ್ನು ನೀಡಿದೆ
- ಭಾರತದಲ್ಲಿ 2020ರಲ್ಲಿ ಬಿಡುಗಡೆಯಾದ ಎರಡನೇ ತಲೆಮಾರಿನ ಕ್ರೆಟಾ ವಾಹನಕ್ಕೆ ಹ್ಯುಂಡೈ ಸಂಸ್ಥೆಯು ಮೊದಲ ಬಾರಿಗೆ ಇಷ್ಟೊಂದು ಪ್ರಮಾಣದಲ್ಲಿ ಬದಲಾವಣೆಯನ್ನು ಮಾಡಿದೆ.
- ಏಳು ವಿವಿಧ ವೇರಿಯಂಟ್ ಗಳನ್ನು ನೀಡಲಾಗುತ್ತಿದ್ದು, ಆನ್ಲೈನ್ ಮತ್ತು ಡೀಲರುಗಳಲ್ಲಿ ರೂ. 25,000 ಕ್ಕೆ ಬುಕಿಂಗ್ ತೆರೆದಿದೆ.
- ಹೊರಾಂಗಣದಲ್ಲಿ ದೊಡ್ಡದಾದ ಮತ್ತು ಮರುವಿನ್ಯಾಸಕ್ಕೆ ಒಳಗಾದ ಗ್ರಿಲ್ ಮತ್ತು ಸಂಪರ್ಕಿತ ಲೈಟಿಂಗ್ ಸೆಟಪ್ ಗಳನ್ನು ಕಾಣಬಹುದು.
- ಒಳಗಡೆಯಲ್ಲಿ ಇದು ನುಣುಪಾದ ಎಸಿ ವೆಂಟ್ ಗಳು ಮತ್ತು ಡ್ಯುವಲ್ ಡಿಸ್ಪ್ಲೇಗಳನ್ನು ಸೇರಿದಂತೆ ಡ್ಯಾಶ್ ಬೋರ್ಡ್ ಗೆ ಹೊಸತನವನ್ನು ನೀಡಿದೆ.
- 10.25 ಇಂಚಿನ ಚಾಲಕನ ಡಿಜಿಟಲ್ ಡಿಸ್ಪ್ಲೇ, 360 ಡಿಗ್ರಿ ಕ್ಯಾಮರಾ ಮತ್ತು ADAS ಮುಂತಾದ ಹೊಸ ವೈಶಿಷ್ಟ್ಯಗಳನ್ನು ಇದು ಒಳಗೊಂಡಿರಲಿದೆ.
- ಪವರ್ ಟ್ರೇನ್ ಆಯ್ಕೆಗಳು ಮೊದಲಿನಂತೆಯೇ ಇರಲಿವೆ; ವೆರ್ನಾದ 1.5 ಲೀಟರ್ ಟರ್ಬೊವನ್ನು ಸಹ ಇದಕ್ಕೆ ಸೇರಿಸಲಾಗಿದೆ.
- ಇದು ಜನವರಿ 16ರಂದು ಬಿಡುಗಡೆಯಾಗಲಿದ್ದು, ಬೆಲೆಯು ರೂ. 11 ಲಕ್ಷದಿಂದ (ಎಕ್ಸ್-ಶೋರೂಂ) ಪ್ರಾರಂಭಗೊಳ್ಳಲಿದೆ.
ಹ್ಯುಂಡೈ ಕ್ರೆಟಾ ಫೇಸ್ ಲಿಫ್ಟ್ ಕಾರನ್ನು ಈ ಕಾರು ತಯಾರಕ ಸಂಸ್ಥೆಯು ಕೆಲವೇ ದಿನಗಳಲ್ಲಿ ಬಿಡುಗಡೆ ಮಾಡಲಿದ್ದು, ಪರಿಷ್ಕೃತ SUV ಯ ಮೊದಲ ಕೆಲವು ಟೀಸರ್ ಚಿತ್ರಗಳನ್ನು ಈಗಾಗಲೇ ಹಂಚಿಕೊಂಡಿದೆ. ಹ್ಯುಂಡೈ ಸಂಸ್ಥೆಯು ಹೊಸ SUV ಯನ್ನು ರೂ. 25,000 ಕ್ಕೆ ಆನ್ಲೈನ್ ಮತ್ತು ಹಾಗೂ ಇದರ ಪ್ಯಾನ್ ಇಂಡಿಯಾ ಡೀಲರ್ ಜಾಲದಲ್ಲಿ ಬುಕಿಂಗ್ ತೆಗೆದುಕೊಳ್ಳಲು ಆರಂಭಿಸಿದೆ. ಇದನ್ನು ಒಟ್ಟು ಏಳು ವಿಸ್ತೃತ ವೇರಿಯಂಟ್ ಗಳಲ್ಲಿ ನೀಡಲಾಗುತ್ತದೆ: E, EX, S, S (O), SX, SX ಟೆಕ್, ಮತ್ತು SX (O).
ಹೊರಗಡೆ ಇದು ಹೇಗಿದೆ?
ಈ ಕಾರು ತಯಾರಕ ಸಂಸ್ಥೆಯು ಪರಿಷ್ಕೃತ ಕ್ರೆಟಾದ ಕುರಿತು ಸಂಪೂರ್ಣ ಮಾಹಿತಿಯನ್ನು ನೀಡದೆ ಇದ್ದರೂ, ಮೊದಲ ಚಿತ್ರಗಳು ಇದರ ಗಮನಾರ್ಹ ವಿನ್ಯಾಸ ಬದಲಾವಣೆಯ ಕುರಿತು ಚಿತ್ರಣವನ್ನು ನೀಡಿವೆ. ಹ್ಯುಂಡೈ ಸಂಸ್ಥೆಯು ಪರಿಷ್ಕೃತ ಕ್ರೆಟಾ ವಾಹನಕ್ಕೆ ʻಸೆನ್ಸ್ಯುವಸ್ ಸ್ಪೋರ್ಟಿನೆಸ್ʼ ವಿನ್ಯಾಸ ಭಾಷೆಯನ್ನು ಅನುಸರಿಸಿದ್ದು, ಮುಂಭಾಗದಲ್ಲಿ ಉದ್ದನೆಯ LED DRL ಪಟ್ಟಿ, ಲಂಬಾಂತರವಾಗಿ ಇರಿಸಲಾದ, ಮರುವಿನ್ಯಾಸಕ್ಕೆ ಒಳಪಡಿಸಿದ ಮತ್ತು ವಿಭಜಿತ ಕ್ವಾಡ್ ಬೀಮ್ ಹೆಡ್ ಲೈಟ್, ಪರಿಷ್ಕೃತ ದೊಡ್ಡದಾದ ಗ್ರಿಲ್ ಮತ್ತು ಹೊಸತನವನ್ನು ಪಡೆದ ದಪ್ಪನೆಯ ಬಂಪರ್ ಅನ್ನು ಇದು ಹೊಂದಿದೆ.
ಇದರ ಹಿಂಭಾಗಕ್ಕೆ ಹೆಚ್ಚು ಸ್ಪಷ್ಟವಾದ ಮತ್ತು ಸರಳ ವಿನ್ಯಾಸವನ್ನು ನೀಡಲಾಗಿದ್ದು, ಹೊಸದಾಗಿ ವಿನ್ಯಾಸಗೊಳಿಸಲಾದ ಟೇಲ್ ಗೇಟ್ ಇದರಲ್ಲಿ ಸಂಪರ್ಕಿತ LED ಲೈಟ್ ಗಳನ್ನು ಹೊಂದಿದ್ದು, ಮುಂಭಾಗದ ಎರಡು L ಆಕಾರದ LED DRL ಮಾದರಿಗಳನ್ನು ನಕಲು ಮಾಡಿದೆ. ಅದಲ್ಲದೆ, ವೇರಿಯಂಟ್ ವಾರು ಬ್ಯಾಜಿಂಗ್ ಮತ್ತು ಹೊಸ ಬಂಪರ್ ಅನ್ನು ಈ ವಾಹನದಲ್ಲಿ ಗಮನಿಸಲಾಗಿದೆ. ಪರಿಷ್ಕೃತ SUV ಯ ಪ್ರೊಫೈಲ್ ಕುರಿತು ಸದ್ಯಕ್ಕೆ ಸೀಮಿತ ವಿವರಗಳಷ್ಟೇ ದೊರಕಿಸದ್ದು, ಹೊಸ ಅಲೋಯ್ ವೀಲ್ ಗಳನ್ನು ಹೊರತುಪಡಿಸಿ ಬೇರೇನೂ ಪ್ರಮುಖ ಬದಲಾವಣೆಗಳು ಇದರಲ್ಲಿ ಕಂಡು ಬರುವುದಿಲ್ಲ.
ಒಳಾಂಗಣದಲ್ಲೂ ಪರಿಷ್ಕರಣೆ
ಹ್ಯುಂಡೈ ಸಂಸ್ಥೆಯು 2024 ಕ್ರೆಟಾದ ಕ್ಯಾಬಿನ್ ನ ಟೀಸರ್ ಚಿತ್ರಗಳನ್ನು ಬಿಡುಗಡೆ ಮಾಡಿದ್ದು, ಇನ್ನೂ ಸಹ ಇದು ಡ್ಯುವಲ್ ಟೋನ್ ಥೀಮ್ ಆಯ್ಕೆಯನ್ನು ಮುಂದುವರಿಸಿದೆ. ಅಲ್ಲದೆ ಇದರ ಒಳಾಂಗಣದಲ್ಲಿ ಮಾಡಲಾಗಿರುವ ಪ್ರಮುಖ ಪರಿಷ್ಕರಣೆಗಳ ಕುರಿತು ಸ್ಪಷ್ಟ ಚಿತ್ರಣ ಹೊರಬಂದಿದೆ. ಇದರ ಡ್ಯಾಶ್ ಬೋರ್ಡ್ ಅನ್ನು ಸಂಪೂರ್ಣವಾಗಿ ಬದಲಾಯಿಸಲಾಗಿದ್ದು, ಸೆಲ್ಟೋಸ್ ಫೇಸ್ ಲಿಫ್ಟ್ ನಲ್ಲಿರುವಂತಹ ಡ್ಯುವಲ್ ಡಿಜಿಟಲ್ ಸ್ಕ್ರೀನ್ ಗಳು ಇದರಲ್ಲಿ ಕಂಡುಬಂದಿವೆ. ಪ್ರಯಾಣಿಕನ ಪಕ್ಕದ ಡ್ಯಾಶ್ ಬೋರ್ಡ್ ನ ಮೇಲ್ಭಾಗವು ಪಿಯಾನೊ ಬ್ಲ್ಯಾಕ್ ಪ್ಯಾನೆಲ್ ಅನ್ನು ಹೊಂದಿದ್ದು, ಪಕ್ಕದ ಎಸಿ ವೆಂಟ್ ಅನ್ನು ಹೊಂದಿದೆ. ಇದರ ಕೆಳಗೆ ಆಂಬಿಯೆಂಟ್ ಲೈಟಿಂಗ್ ಜೊತೆಗೆ ಮುಕ್ತ ಸ್ಟೋರೇಜ್ ಸ್ಥಳವನ್ನು ಒದಗಿಸಲಾಗಿದೆ. ಪರಿಷ್ಕೃತ SUV ಯು ಟಚ್ ಎನೇಬಲ್ಡ್ ಕ್ಲೈಮೇಟ್ ಕಂಟ್ರೋಲ್ ಪ್ಯಾನೆಲ್ ಜೊತೆಗೆ ಹೊಸ ಮತ್ತು ನುಣುಪಾದ ಸೆಂಟ್ರಲ್ AC ವೆಂಟ್ ಗಳನ್ನು ಹೊಂದಿದೆ.
ಇದರ ಕೆಳಭಾಗದ ಸೆಂಟರ್ ಕನ್ಸೋಲ್ ಈಗಲೂ ಸಹ ಕ್ಲೈಮೇಟ್ ಕಂಟ್ರೋಲ್ ಪ್ಯಾನೆಲ್ ತನಕ ಚಾಚಿಕೊಂಡಿದ್ದರೂ ಪರಿಷ್ಕರಣೆಗೆ ಒಳಗಾಗಿರುವಂತೆ ಕಂಡುಬರುತ್ತದೆ. ಇದು ವೈರ್ ಲೆಸ್ ಫೋನ್ ಚಾರ್ಜಿಂಗ್ ಡಾಕ್ (ಆಂಬಿಯೆಂಟ್ ಲೈಟಿಂಗ್ ಜೊತೆಗೆ), ಗೇರ್ ಶಿಫ್ಟರ್, ಮತ್ತು ಫ್ರಂಟ್ ಕಪ್ ಹೋಲ್ಡರ್ ಗಳನ್ನು ಹೊಂದಿದೆ.
ವೈಶಿಷ್ಟ್ಯಗಳು ಮತ್ತು ಸುರಕ್ಷತಾ ತಂತ್ರಜ್ಞಾನ
ಈ ಎಲ್ಲಾ ಪರಿಷ್ಕರಣೆಗಳೊಂದಿಗೆ ಹ್ಯುಂಡೈ ಕ್ರೆಟಾ ವಾಹನವು ಹೊಸ ಕಿಯಾ ಸೆಲ್ಟೋಸ್ ನಲ್ಲಿ ಇರುವಂತೆಯೇ 10.25 ಇಂಚಿನ ಚಾಲಕನ ಡಿಜಿಟಲ್ ಡಿಸ್ಪ್ಲೇ, ಡ್ಯುವಲ್ ಜೋನ್ ಎಸಿ, 360 ಡಿಗ್ರಿ ಕ್ಯಾಮರಾ ಮತ್ತು ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂ (ADAS) ಇತ್ಯಾದಿಗಳನ್ನು ಹೊಂದಿದೆ.
ವೆಂಟಿಲೇಟೆಡ್ ಫ್ರಂಟ್ ಸೀಟ್ ಗಳು, ಪ್ಯಾನೊರಾಮಿಕ್ ಸನ್ ರೂಫ್, ಆರು ಏರ್ ಬ್ಯಾಗ್ ಗಳು, 10.25 ಇಂಚಿನ ಟಚ್ ಸ್ಕ್ರೀನ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ (TPMS) ಇತ್ಯಾದಿ ಇತರ ವೈಶಿಷ್ಟ್ಯಗಳನ್ನು ಈಗ ನಿವೃತ್ತಿ ಹೊಂದಲಿರುವ ಮಾದರಿಯಿಂದ ಮುಂದುವರಿಸಲಾಗಿದೆ.
ಇದನ್ನು ಸಹ ಓದಿರಿ: ಟ್ರಾಫಿಕ್ ನಲ್ಲಿ ಸಿಲುಕಿಕೊಂಡಾಗ ನಿಮ್ಮ ಕಾರನ್ನು ರಕ್ಷಿಸಲು ಇರುವ 7 ಸಲಹೆಗಳು
ಇದರ ಎಂಜಿನ್ ಹೇಗಿರಲಿದೆ?
ಈ ಹಿಂದೆ ಲಭ್ಯವಿದ್ದ 1.5 ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ (115 PS/144 Nm) ಮತ್ತು ಡೀಸೆಲ್ (115 PS/250 Nm) ಎಂಜಿನ್ ಗಳನ್ನು ಮುಂದುವರಿಸುವುದರ ಜೊತೆಗೆ ಹೊಸ ಕ್ರೆಟಾವು ಹೊಸ ಹ್ಯುಂಡೈ ವೆರ್ನಾದಲ್ಲಿರುವ 1.5 ಲೀಟರ್ ಟರ್ಬೊ ಪೆಟ್ರೋಲ್ (160 PS/253 Nm) ಅನ್ನು ಸಹ ಹೊಂದಿರಲಿದೆ. ಟ್ರಾನ್ಸ್ ಮಿಶನ್ ಆಯ್ಕೆಗಳಲ್ಲಿ 6-ಸ್ಪೀಡ್ MT, CVT, 7-ಸ್ಪೀಡ್ DCT (ಡ್ಯುವಲ್ ಕ್ಲಚ್ ಟ್ರಾನ್ಸ್ ಮಿಶನ್), ಮತ್ತು 6-ಸ್ಪೀಡ್ AT ಇತ್ಯಾದಿಗಳು ಒಳಗೊಂಡಿವೆ.
ನಿರೀಕ್ಷಿತ ಬಿಡುಗಡೆ ಮತ್ತು ಬೆಲೆಗಳು
ಪರಿಷ್ಕೃತ ಹ್ಯುಂಡೈ ಕ್ರೆಟಾ ಕಾರು ಜನವರಿ 16ರಂದು ಮಾರುಕಟ್ಟೆಗೆ ಬಿಡುಗಡೆಯಾಗಲಿದ್ದು, ಬೆಲೆಯು ರೂ. 11 ಲಕ್ಷದಿಂದ ಪ್ರಾರಂಭಗೊಳ್ಳಲಿದೆ (ಎಕ್ಸ್-ಶೋರೂಂ). ಇದು ಮಾರುತಿ ಗ್ರಾಂಡ್ ವಿಟಾರ, ಕಿಯಾ ಸೆಲ್ಟೋಸ್, ಹೋಂಡಾ ಎಲೆವೇಟ್, ಸ್ಕೋಡಾ ಕುಶಕ್ ಮತ್ತು ಸಿಟ್ರಾನ್ C3 ಏರ್ ಕ್ರಾಸ್ ಜೊತೆಗೆ ಸ್ಪರ್ಧಿಸುವುದನ್ನು ಮುಂದುವರಿಸಲಿದೆ.
ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ಕ್ರೆಟಾ ಅಟೋಮ್ಯಾಟಿಕ್