Tata Nexon Facelift: ಒಳಾಂಗಣದ ನೋಟವನ್ನು ಕಟ್ಟಿ ಕೊಡುವ 15 ಚಿತ್ರಗಳು
ಟಾಟಾ ನೆಕ್ಸಾನ್ ಗಾಗಿ tarun ಮೂಲಕ ಸೆಪ್ಟೆಂಬರ್ 08, 2023 05:02 pm ರಂದು ಪ್ರಕಟಿಸಲಾಗಿದೆ
- 34 Views
- ಕಾಮೆಂಟ್ ಅನ್ನು ಬರೆಯಿರಿ
ನೆಕ್ಸನ್ ಫೇಸ್ ಲಿಫ್ಟ್ ವಾಹನದ ಹೊರಭಾಗದಂತೆಯೇ ಒಳಭಾಗವು ಸಹ ಹೆಚ್ಚು ಆಧುನಿಕ ಹಾಗೂ ವರ್ಣರಂಜಿತವಾಗಿ ಕಂಡು ಬರುತ್ತದೆ
ಟಾಟಾ ನೆಕ್ಸನ್ ಫೇಸ್ ಲಿಫ್ಟ್ ಕಾರನ್ನು ಇತ್ತೀಚಿಗೆ ಬಿಡುಗಡೆ ಮಾಡಲಾಗಿದ್ದು, ಸೆಪ್ಟೆಂಬರ್ 14ರಿಂದ ಇದು ಮಾರಾಟಕ್ಕೆ ಲಭ್ಯ. ಹೊರಾಂಗಣ ಮತ್ತು ಒಳಾಂಗಣ ಎರಡಕ್ಕೂ ಸಾಕಷ್ಟು ಸುಧಾರಣೆ ತರಲಾಗಿದ್ದು, ಈ ವಾಹನವು ಹೆಚ್ಚು ಆಧುನಿಕ ಹಾಗೂ ಆಕರ್ಷಕವಾಗಿ ಮೂಡಿಬಂದಿದೆ. ಹೊರಗಡೆಯಿಂದ, 2023 ನೆಕ್ಸನ್ ವಾಹನದ ಕುರಿತು ಸಾಕಷ್ಟು ಚರ್ಚೆ ನಡೆದಿದೆ. ಇದೀಗ ಇದರ ಆಧುನೀಕರಿಸಿದ ಕ್ಯಾಬಿನ್ ಅನ್ನು ಹತ್ತಿರದಿಂದ ನೋಡೋಣ. ನೀವು ಇದನ್ನು ಖರೀದಿಸಲು ಇಚ್ಛಿಸುವುದಾದರೆ ಈ ಕೆಳಗಿನ ವಿಷಯವನ್ನು ಓದಲೇಬೇಕು.
ಹಳೆಯ ನೆಕ್ಸನ್ ವಾಹನವು ಇಡೀ ಕ್ಯಾಬಿನ್ ನಲ್ಲಿ ಕಪ್ಪು ಮತ್ತು ಬೇಜ್ ಡ್ಯುವಲ್ ಟೋನ್ ಛಾಯೆಯನ್ನು ಹೊಂದಿದ್ದರೆ, ಈ ಫೇಸ್ ಲಿಫ್ಟ್ ಕಾರು ಕಪ್ಪು ಮತ್ತು ಬೂದು ಬಣ್ಣದ ಥೀಮ್ ಅನ್ನು ಹೊಂದಿದೆ. ಇನ್ನೂ ಹೆಚ್ಚಿನ ಪ್ರೀಮಿಯಂ ನೋಟವನ್ನು ನೀಡುವುದಕ್ಕಾಗಿ ಬ್ರಶ್ಡ್ ಸಿಲ್ವರ್ ಆಕ್ಸೆಂಟ್ ಗಳು, ಸಾಫ್ಟ್ ಟಚ್ ಸಾಮಗ್ರಿಗಳು ಮತ್ತು ಫಾಕ್ಸ್ ಕಾರ್ಬನ್ ಫೈಬರ್ ಫಿನಿಶ್ ಅನ್ನು ಡ್ಯಾಶ್ ಬೋರ್ಡಿನಲ್ಲಿ ಕಾಣಬಹುದು.
ಆದರೆ ಟಾಟಾ ಸಂಸ್ಥೆಯು ಈ ಕಾರಿನ ಆಧುನೀಕರಣವನ್ನು ಕೇವಲ ಒಳಾಂಗಣಕ್ಕಷ್ಟೇ ಸೀಮಿತಗೊಳಿಸಿಲ್ಲ. ವೇರಿಯಂಟ್ ಮತ್ತು ಹೊರಾಂಗಣದ ಬಣ್ಣಗಳನ್ನು ಆಧರಿಸಿ, ಈ ವಾಹನವನ್ನು ಖರೀದಿಸುವವರು ಭಿನ್ನವಾದ ಒಳಾಂಗಣ ಕ್ಯಾಬಿನ್ ಥೀಮ್ ಗಳನ್ನು ಪಡೆಯಬಹುದು. ಉದಾಹರಣೆಗೆ, ಫಿಯರ್ ಲೆಸ್ ಪರ್ಪಲ್ ಎಕ್ಸ್ ಟೀರಿಯರ್ ಶೇಡ್ ಜೊತೆಗೆ ಕಪ್ಪು ಮತ್ತು ನೇರಳೆ ಬಣ್ಣದ ಒಳಾಂಗಣವು ಲಭ್ಯವಿದ್ದು, ಇದು ಟಾಪ್ ಎಂಡ್ ಫಿಯರ್ ಲೆಸ್ ವೇರಿಯಂಟ್ ಗೆ ಮಾತ್ರವೇ ಸೀಮಿತವಾಗಿದೆ.
ಈ ಪರಿಷ್ಕೃತ ಟಾಟಾ SUV ವಾಹನದ ಕುರಿತು ಲಭ್ಯವಾಗಿರುವ ಇನ್ನೊಂದು ಮಾಹಿತಿಯು ಇದರ ಸ್ಟೀಯರಿಂಗ್ ವೀಲ್ ಗೆ ಸಂಬಂಧಿಸಿದೆ. ನೆಕ್ಸನ್ ಫೇಸ್ ಲಿಫ್ಟ್ ಕಾರು ಹೊಸ ಹಾಗೂ ಅತ್ಯಾಧುನಿಕ ಟು-ಸ್ಪೋಕ್ ಸ್ಟೀಯರಿಂಗ್ ವೀಲ್ ಅನ್ನು ಹೊಂದಿರಲಿದ್ದು, ಅವಿನ್ಯಾ ಪರಿಕಲ್ಪನೆಯನ್ನು ಇದು ಹೋಲುತ್ತದೆ. ನಡುವಿನಲ್ಲಿರುವ ಗ್ಲಾಸ್ ಪ್ಯಾನೆಲ್, ಎರಡೂ ಕಡೆಗಳಲ್ಲಿ ವಿವಿಧ ಕಂಟ್ರೋಲ್ ಗಳ ಜೊತೆಗೆ ಬ್ಯಾಕ್ ಲಿಟ್ ಟಾಟಾ ಲೋಗೋವನ್ನು ಹೊಂದಿದೆ. ಎಡಗಡೆಗೆ ಆಡಿಯೋ ಮತ್ತು ಟೆಲಿಫೋನಿ ಕಂಟ್ರೋಲ್ ಇದ್ದರೆ, ಬಲಗಡೆಗೆ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಕ್ರೂಸ್ ಕಂಟ್ರೋಲ್ ಇದೆ.
ಈ ಹಿಂದಿನ ಡಿಜಿಟೈಸ್ಡ್ ಕ್ಲಸ್ಟರ್ ಗೆ ಹೋಲಿಸಿದರೆ ಹೊಚ್ಚ ಹೊಸ 10.25 ಇಂಚಿನ ಚಾಲಕನ ಡಿಜಿಟಲ್ ಡಿಸ್ಪ್ಲೇಯು ಪ್ರಮುಖ ಬದಲಾವಣೆ ಎನಿಸಲಿದೆ. ಈ ಡಿಸ್ಪ್ಲೇಯು ಆಕರ್ಷಕವಾಗಿ ಮೂಡಿಬಂದಿದ್ದು, ಇಂಟರ್ ಫೇಸ್ ಸೊಗಸಾಗಿ ಹಾಗೂ ನಾಜೂಕಾಗಿ ಕಂಡು ಬರುತ್ತದೆ. ಸದ್ಯಕ್ಕೆ ಹಾಡಲಾಗುತ್ತಿರುವ ಹಾಡು, ಇಂಧನದ ಸರಾಸರಿ ದಕ್ಷತೆ, ಡಿಜಿಟಲ್ ಸ್ಪೀಡೋಮೀಟರ್ ಇತ್ಯಾದಿ ಮಾಹಿತಿಯನ್ನು ನೀವಿಲ್ಲಿ ಸ್ಕ್ರೋಲ್ ಮಾಡಬಹುದು.
ಇದನ್ನು ಸಹ ಓದಿರಿ: ಮಾರುತಿ ಬ್ರೆಜ್ಜಾಕ್ಕೆ ಹೋಲಿಸಿದರೆ ಹೊಸ ಟಾಟಾ ನೆಕ್ಸನ್ ಈ 5 ವಿಶೇಷತೆಗಳನ್ನು ಹೊಂದಿದೆ
ಫುಲ್ ಸ್ಕ್ರೀನ್ ನೇವಿಗೇಶನ್ ವ್ಯೂ ಇಲ್ಲಿ ಇನ್ನಷ್ಟು ಅದ್ಭುತವಾಗಿ ಮೂಡಿಬಂದಿದ್ದು, ಈ ವೈಶಿಷ್ಟ್ಯವನ್ನು ಐಷಾರಾಮಿ ಕಾರುಗಳಿಂದ ಪಡೆಯಲಾಗಿದೆ.
ಸಣ್ಣದಾದ ಮತ್ತು ಸದ್ಯಕ್ಕೆ ಹಳೆಯದಾದ 7 ಇಂಚಿನ ಟಚ್ ಸ್ಕ್ರೀನ್ ಸಿಸ್ಟಂ (ಉನ್ನತ ದರ್ಜೆಯ ವೇರಿಯಂಟ್ ಗಳಲ್ಲಿ) ಬದಲಿಗೆ ಈಗ ದೊಡ್ಡದಾದ ಹಾಗೂ ಹೆಚ್ಚು ಪ್ರೀಮಿಯಂ ಎನಿಸಿದ 10.25 ಇಂಚಿನ ಫ್ಲೋಟಿಂಗ್ ಇನ್ಫೊಟೈನ್ ಮೆಂಟ್ ಬಂದಿದೆ. ಇದು ಇನ್ನೂ ಹರ್ಮನ್ ಕಾರ್ದೊನ್ ಯೂನಿಟ್ ಆಗಿದ್ದರೂ, ವೈರ್ ಲೆಸ್ ಆಂಡ್ರಾಯ್ಸ್ ಅಟೋ ಮತ್ತು ಆಪಲ್ ಕಾರ್ ಪ್ಲೇ ಜೊತೆಗೆ 9-ಸ್ಪೀಕರ್ JBP ಸೌಂಡ್ ಸಿಸ್ಟಂ ಅನ್ನು ಹೊಂದಿದೆ. ಇಲ್ಲಿ ಅತ್ಯುನ್ನತ ವೇರಿಯಂಟ್ ಗಳಲ್ಲಿ ನೋಡಿದಂತೆ, ಇದು ಪ್ರೀಮಿಯಂ ನೋಟವನ್ನು ನೀಡುವುದಕ್ಕಾಗಿ ಲಘು ರೂಪದ ಬೆಜೆಲ್ ಗಳನ್ನು ಇದು ಹೊಂದಿದೆ. ಹೊಸ ಟಚ್ ಸ್ಕ್ರೀನ್ ವ್ಯವಸ್ಥೆಯನ್ನು ನೆಕ್ಸನ್ EV ಮ್ಯಾಕ್ಸ್, ಸಫಾರಿ ಮತ್ತು ಹ್ಯರಿಯರ್ ನಿಂದ ಎರವಲು ಪಡೆಯಲಾಗಿದೆ. ನಮ್ಮ ವಿಮರ್ಶೆಯ ಪ್ರಕಾರ ಇದು ಇನ್ನಷ್ಟು ನುಣುಪಾಗಿ ಮೂಡಿ ಬಂದಿದ್ದು, ಅನುಭವವು ಇನ್ನಷ್ಟು ಚೆನ್ನಾಗಿತ್ತು.
ಟಾಟಾ ಸಂಸ್ಥೆಯು, ಮುಖ್ಯ ಡ್ಯಾಶ್ ಬೋರ್ಡಿನ ಕೆಳಗಡೆ ಕ್ಲೈಮೇಟ್ ಕಂಟ್ರೋಲ್ ಪ್ಯಾನೆಲ್ ಗೆ ಹ್ಯಾಪ್ಟಿಕ್ ಟಚ್ ನೀಡುವ ಜೊತೆಗೆ ಸೆಂಟ್ರಲ್ ಕನ್ಸೋಲ್ ನ ಟಚ್ ಇಂಟರ್ ಫೇಸ್ ಅನುಭವವನ್ನು ವಿಸ್ತರಿಸಿದೆ. ಫ್ಯಾನ್ ವೇಗ ಮತ್ತು ತಾಪಮಾನದ ಹೊಂದಾಣಿಕೆ ಮಾಡುವುದಕ್ಕಾಗಿ ನೀವಿನ್ನೂ ಫಿಸಿಕಲ್ ಟಾಗಲ್ ಅನ್ನು ಪಡೆಯುತ್ತೀರಿ. ಈ ಹಿನ್ನೆಲೆಯಲ್ಲಿ ಇದು ಸ್ಕೋಡ ಕುಶಕ್ ಮತ್ತು ಫಾಕ್ಸ್ ವ್ಯಾಗನ್ ತೈಗುನ್ ಮಾದರಿಗಳ ಟಚ್ ಕ್ಲೈಮೇಟ್ ಪ್ಯಾನಲ್ ಗಳಿಗಿಂತ ಭಿನ್ನವಾಗಿದೆ. ಇಲ್ಲಿರುವ ಇತರ ಟಚ್ ಕಂಟ್ರೋಲ್ ಗಳೆಂದರೆ, 260 ಡಿಗ್ರಿ ಕ್ಯಾಮರಾ, ಬೂಟ್ ರಿಲೀಸ್ ಮತ್ತು ಸೆಂಟ್ರಲ್ ಲಾಕಿಂಗ್ ಇತ್ಯಾದಿ.
ಇದರ ಕೆಳಗೆ ಇಕ್ಕಟ್ಟಾದ ಸ್ಥಳವಿದ್ದು, ದೊಡ್ಡ ಗಾತ್ರದ ಯಾವುದೇ ವಸ್ತುವನ್ನು ಇಡಲು ಇದು ಸಾಲದು. ಆದರೆ ಇಲ್ಲಿ 12V ಸಾಕೆಟ್, ಸಾಮಾನ್ಯ USB ಪೋರ್ಟ್ ಮತ್ತು ಟೈಪ್-C ಪೋರ್ಟ್ ಅನ್ನು ನೀವು ಕಾಣಬಹುದು.
ಇದನ್ನು ಸಹ ಓದಿರಿ: ಟಾಟಾ ನೆಕ್ಸನ್ ಫೇಸ್ ಲಿಫ್ಟ್ ಮಾದರಿಯ ಬೇರೆ ಬೇರೆ ಕ್ಯಾಬಿನ್ ಥೀಮ್ ಗಳನ್ನು ಇಲ್ಲಿ ಕಾಣಿರಿ
ಸಾಮಾನ್ಯ ಸ್ಟೋರೇಜ್ ಸ್ಥಳ ಸ್ಲೈಡಿಂಗ್ ಕವರ್ ಜೊತೆಗೆ, ಕನ್ಸೋಲ್ ಟನೆಲ್ ಮೇಲೆ ವೈರ್ ಲೆಸ್ ಫೋನ್ ಚಾರ್ಜರ್ ಅನ್ನು ಅಳವಡಿಸಲಾಗಿದೆ.
ಟಾಟಾ ಸಂಸ್ಥೆಯು ಇನ್ನೂ ಸೆಂಟರ್ ಕನ್ಸೋಲ್ ನಲ್ಲಿ ಕಪ್ ಹೋಲ್ಡರ್ ಗಳನ್ನು ಒದಗಿಸಿಲ್ಲ. ಬದಲಾಗಿ ಗ್ಲವ್ ಬಾಕ್ಸ್ ಲಿಡ್ ಡಿಸೈನ್ ಒಳಗಡೆ ನಿಮ್ಮ ಕಪ್ ಇರಿಸಲು ಸ್ಥಳವನ್ನು ಒದಗಿಸುತ್ತದೆ. ಇಲ್ಲಿಯೇ ಹುಲಿಯ ನಕಾಶೆಯೊಂದನ್ನು ಬಿಡಿಸಲಾಗಿದ್ದು, ಟಾಟಾ ಸಂಸ್ಥೆಯು ಈ ಮೂಲಕ ಭಾರತದ ರಾಷ್ಟ್ರೀಯ ಪ್ರಾಣಿಯೊಂದಿಗೆ ಗುರುತಿಸಿಕೊಂಡಿದೆ.
ನೆಕ್ಸನ್ ಮಾದರಿಯು ಹಿಂದುಗಡೆಯ ಪ್ರಯಾಣಿಕರಿಗಾಗಿ ಎರಡು ಸಣ್ಣ ಕಪ್ ಹೋಲ್ಡರ್ ಗಳ ಜೊತೆಗೆ ಮಡಚಬಹುದಾದ ಸೆಂಟರ್ ಆರ್ಮ್ ರೆಸ್ಟ್ ಅನ್ನು ಒದಗಿಸಿದೆ. ನಡುವೆ ಕುಳಿತುಕೊಳ್ಳುವ ಪ್ರಯಾಣಿಕರಿಗೆ ಇದು ಹೆಡ್ ರೆಸ್ಟ್ ಅನ್ನು ಒದಗಿಸದಿದ್ದರೂ, ಎಲ್ಲಾ ಐದು ಸವಾರರಿಗಾಗಿ 3-ಪಾಯಿಂಟ್ ಸೀಟ್ ಬೆಲ್ಟುಗಳನ್ನು ಹೊಂದಿದೆ.
ಹಿಂದುಗಡೆ ಕುಳಿತುಕೊಳ್ಳುವ ಪ್ರಯಾಣಿಕರು, ಹಿಂದಿನ AC ವೆಂಟ್ ಗಳ ಕೆಳಗಡೆ ಇರಿಸಲಾಗಿರುವ USB ಮತ್ತು C - ಟೈಪ್ ಚಾರ್ಜಿಂಗ್ ಪಾಯಿಂಟ್ ಗಳನ್ನು ಬಳಸಬಹುದು.
ನೆಕ್ಸನ್ ಕಾರು 350 ಲೀಟರುಗಳ ಬೂಟ್ ಸಾಮರ್ಥ್ಯವನ್ನು ಹೊಂದಿದ್ದು, ಈ ಹಿಂದಿನ ಆವೃತ್ತಿಗೆ ಹೋಲಿಸಿದರೆ ಈ ವಿಚಾರದಲ್ಲಿ ಯಾವುದೇ ಬದಲಾವಣೆ ಉಂಟಾಗಿಲ್ಲ. ಈ ಹಿಂದಿನ ಫಲಿತಾಂಶಗಳನ್ನು ನೋಡಿದರೆ, ಈ SUV ಯು ಆರಾಮವಾಗಿ 2-3 ಸೂಟ್ ಕೇಸುಗಳಿಗೆ ಸ್ಥಳ ಒದಗಿಸಬಲ್ಲದು.
ಆರು ಏರ್ ಬ್ಯಾಗುಗಳು (ಪ್ರಮಾಣಿತ), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ, ISOFIX ಚೈಲ್ಡ್ ಸೀಟ್ ಮೌಂಟ್ ಗಳು, 360 ಡಿಗ್ರಿ ಕ್ಯಾಮರಾ, ಮತ್ತು ಫ್ರಂಟ್ ಪಾರ್ಕಿಂಗ್ ಸೆನ್ಸಾರ್ ಗಳ ಮೂಲಕ ಸುರಕ್ಷತೆಗೆ ಇದರಲ್ಲಿ ಒತ್ತು ನೀಡಲಾಗಿದೆ.
ಈ ನೆಕ್ಸನ್ ಫೇಸ್ ಲಿಫ್ಟ್ ವಾಹನವು 1.2 ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.5 ಲೀಟರ್ ಡೀಸೆಲ್ ಎಂಜಿನ್ ಮೂಲಕ ಬರಲಿದೆ. ಪೆಟ್ರೋಲ್ ಮಾದರಿಯು 5 ಸ್ಪೀಡ್ ಮ್ಯಾನುವಲ್, 6 ಸ್ಪೀಡ್ ಮ್ಯಾನುವಲ್, 6 ಸ್ಪೀಡ್ AMT, ಮತ್ತು 7 ಸ್ಪೀಡ್ DCT ಆಯ್ಕೆಗಳೊಂದಿಗೆ ಬರುತ್ತದೆ. 6 ಸ್ಪೀಡ್ ಮ್ಯಾನುವಲ್ ಮತ್ತು AMT ಟ್ರಾನ್ಸ್ ಮಿಶನ್ ಗಳ ಜೊತೆಗೆ ಡೀಸೆಲ್ ಎಂಜಿನ್ ಅನ್ನು ಆರಿಸಿಕೊಳ್ಳಬಹುದು. ಅಲ್ಲದೆ ಅಟೋಮ್ಯಾಟಿಕ್ ಟ್ರಾನ್ಸ್ ಮಿಶನ್ ಗಳಲ್ಲಿ ಪ್ಯಾಡಲ್ ಶಿಫ್ಟರ್ ಗಳ ಅನುಕೂಲತೆಯು ಲಭ್ಯ.
ಟಾಟಾ ನೆಕ್ಸನ್ ಫೇಸ್ ಲಿಫ್ಟ್ ವಾಹನವು ಸುಮಾರು ರೂ. 8 ಲಕ್ಷ ಬೆಲೆಗೆ (ಎಕ್ಸ್-ಶೋರೂಂ) ದೊರೆಯುವ ನಿರೀಕ್ಷೆ ಇದೆ. ಇದು ಕಿಯಾ ಸೋನೆಟ್, ಮಹೀಂದ್ರಾ XUV300, ರೆನಾಲ್ಟ್ ಕೀಗರ್, ಮಾರುತಿ ಸುಝುಕಿ ಬ್ರೆಜ್ಜ, ನಿಸ್ಸಾನ್ ಮ್ಯಾಗ್ನೈಟ್ ಮತ್ತು ಹ್ಯುಂಡೈ ವೆನ್ಯು ಇತ್ಯಾದಿ ಕಾರುಗಳೊಂದಿಗೆ ಸ್ಪರ್ಧಿಸುವುದನ್ನು ಮುಂದುವರಿಸಲಿದೆ.
ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ಟಾಟಾ ನೆಕ್ಸನ್ ಆಟೋಮ್ಯಾಟಿಕ್